ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯ ಹಂತ ಅತ್ಯಂತ ಪ್ರಮುಖವಾದದ್ದು, ಕಾಲೇಜುಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.
                 ಅವರು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಎಸ್.ಡಿ.ಎಂ. ಪದವಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
                  ನಾವೆಲ್ಲರೂ ಕಾಲ ಬದಲಾಗಿದೆ ಎನ್ನುತ್ತೇವೆ ಆದರೆ ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ. ಕಾಲೇಜುಗಳೂ ಸಾಧಕರ ಛಾವಣಿಗಳಾಗಬೇಕು ಎಂದರು.
                   ಮುಖ್ಯ ಅತಿಥಿಗಳಾದ ಡಾII ನಜೀಮ್ ಜಾವೇದ್ ಖಾನ್ ಮಾತನಾಡಿ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಪಾಲಕರ ಪ್ರೋತ್ಸಾಹ ಇದ್ದರೆ ಏನು ಬೆಕಾದರೂ ಸಾಧಿಸಬಹುದು. ಹುಟ್ಟುವಾಗಲೇ ಕಾಲಿನ ನ್ಯೂನ್ಯತೆಗೆ ಒಳಗಾದ ನಾನು ಪಾಲಕರ ಪ್ರೋತ್ಸಾಹದಿಂದ ವೈದ್ಯನಾದೆ, ಕ್ರೀಡಾಪಟುವಾದೆ, ಇದಕ್ಕೆಲ್ಲ ನಾನು ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಇರುವುದೇ ಕಾರಣ ಎಂದರು.
                    ವೇದಿಕೆಯಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ಎಂ. ಪಿ. ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾಲೇಜಿನ ವಾರ್ಷಿಕ ಸಂಚಿಕೆ ‘ಶರಾವತಿ’ಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಮಹಾವಿದ್ಯಾಲಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
                     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಠ್ಯ-ಸಹಪಠ್ಯ-ಕ್ರೀಡೆ ಹೀಗೆ ಸರ್ವಾಂಗೀಣವಾಗಿ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
                      ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಡಾ. ಸುರೇಶ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ನಾಗರಾಜ ಹೆಗಡೆ ಅಪಗಾಲ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ನಮನ್ ಹೊನ್ನಾವರ ವಂದಿಸಿದರು. ಡಾ. ರೇಣುಕಾದೇವಿ ಗೋಳಿಕಟ್ಟೆ ಮತ್ತು ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.