ಯುವಜನಸಮುದಾಯ ಪ್ರಜ್ಞಾವಂತರಾಗಬೇಕಾಗಿದೆ

 

                                                                                      
ಭಾರತ ಸರಕಾರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಾಲೂಕಾ ಆಡಳಿತ ಹೊನ್ನಾವರ ಮತ್ತು ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ‘ಮತದಾರರ ಸಾಕ್ಷರತಾ ಸಂಘ’ದ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಮಾನ್ಯ ಹಿರಿಯ ಸಿವಿಲ್ ನ್ಯಾಯಾದೀಶರಾದ ಶ್ರೀ ಎಂ.ವಿ.ಚೆನ್ನಕೇಶವ ರೆಡ್ಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತದ ಪ್ರಜಾಪ್ರಭುತ್ವದ ಉಳಿವಿಗೆ ಯುವಜನಸಮುದಾಯ ಪ್ರಜ್ಞಾವಂತರಾಗಬೇಕಾದ ಅಗತ್ಯತೆಯಿದೆಯೆಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

              ಗೌರವ ಉಪಸ್ಥಿತಿಯನ್ನು ಹೊಂದಿದ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತದಾನವನ್ನು ಯಾವ ಆಸೆ ಆಮಿಶಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ಚಲಾಯಿಸಿದಾಗ ಒಳ್ಳೆಯ ಸರಕಾರ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವ ಉಳಿಯುತ್ತದೆಯೆಂದು ಸಭೆಗೆ ತಿಳಿಸಿದರು. ಡಾ ಎಂ. ಆರ್. ನಾಯಕ ಪ್ರಾಧ್ಯಾಪಕರು, ಎಸ್.ಡಿ.ಎಂ. ಕಾಲೇಜು ಹೊನ್ನಾವರ ರಾಷ್ಟ್ರೀಯ ಮತದಾರರ ದಿನಾಚರಣೆಯ ಆಶಯವನ್ನು ಅರ್ಥಮಾಡಿಕೊಂಡು ಯುವಜನಸಮುದಾಯ ಪ್ರಜ್ಞಾವಂತರಾಗಿ ದೇಶಪ್ರೇಮದ ಭಾವನೆಯನ್ನು ಬೆಳೆಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ದೇಶವನ್ನು ಬ್ರಿಟೀಷ್ ಸಾಮ್ರಾಜ್ಯಶಾಹಿ ದಾಸತ್ವದಿಂದ ಬಂಧ ವಿಮೋಚನೆಗೊಳಿಸುವಲ್ಲಿ ಪ್ರಯತ್ನಿಸಿ ಹುತಾತ್ಮರಾದ ಮಹಾಪುರುಷರ ತ್ಯಾಗದ ಸಮಾದಿಯ ಮೇಲೆ ಪ್ರೀತಿ ವಿಶ್ವಾಸ ಮತ್ತು ಸಾಮರಸ್ಯದ ಪ್ರಗತಿಪರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಧೃಡಗೊಳಿಸುವಲ್ಲಿ ಯುವದೇಶವೆಂದೇ ಕರೆಯಲ್ಪಡುವ ಭಾರತ ದೇಶದ ಯುವ ಸಮುದಾಯ ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಮತದಾನ ಮಾಡಿ ಎಂದು ತಮ್ಮ ವಿಶೇಷ ಉಪನ್ಯಾಸದ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯುವಕರಿಗೆ ದೇಶಪ್ರೇಮದ ಕುರಿತಾದ ಪ್ರೇರಣೆಯನ್ನು ನೀಡಿದರು.

           ವೇದಿಕೆಯ ಮೇಲೆ ಉಪಸ್ಥಿತರಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕರವರು ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದದ್ದಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ತಮ್ಮ ತಮ್ಮ ಪ್ರಾಮಾಣಿಕ ಕರ್ತವ್ಯವನ್ನು ನಿರ್ವಹಿಸಬೇಕಾದ ಅಗತ್ಯತೆಯಿದೆಯೆಂದು ತಿಳಿಸಿದರು. ಶ್ರೀ ಕೆ. ವಿ. ನಾಯ್ಕ ಅಧ್ಯಕ್ಷರು, ವಕೀಲ ಸಂಘ ಹೊನ್ನಾವರ, ಶ್ರೀ ಸೂರಜ್ ನಾಯ್ಕ, ಕಾರ್ಯದರ್ಶಿಗಳು, ವಕೀಲರ ಸಂಘ, ಶ್ರೀ ಬದರಿನಾಥ ನಾಯರಿ ಕೆ. ಸಹಾಯಕ ಸರಕಾರಿ ಅಭಿಯೋಜಕರು, ತಾಲೂಕಾ ಧಂಡಾಧಿಕಾರಿಗಳಾದ ಶ್ರೀ ವಿ. ಆರ್. ಗೌಡ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

           ಕುಮಾರಿ ಸಂಗೀತಾ ನಾಯ್ಕರ ಸುಶ್ರಾವ್ಯವಾದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರೊ. ಜಿ.ಎಸ್.ಹೆಗಡೆ, ಎನ್.ಎಸ್.ಎಸ್. ಅಧಿಕಾರಿಗಳು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶ್ರೀ ಸುದೀಶ ನಾಯ್ಕ ಸರ್ವರನ್ನೂ ಸ್ವಾಗತಿಸಿದರು. ಪ್ರೊ. ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೊ. ಪ್ರಶಾಂತ ಹೆಗಡೆ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿದರು. ಒಟ್ಟಾರೆಯಾಗಿ ಮತದಾರರ ದಿನಾಚರಣೆಯ ಈ ಕಾರ್ಯಕ್ರಮವು ಯುವಜನರಲ್ಲಿ ಜಾಗ್ರತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಪಟ್ಟಣ ಪಂಚಾಯತದಿಂದ ಪ್ರಾರಂಭವಾದ ಮತದಾರ ದಿನಾಚರಣೆಯ ಅಂಗವಾಗಿ ನಡೆದ ಜಾಥಾವು ಎಸ್.ಡಿ.ಎಂ. ಮಹಾವಿದ್ಯಾಲಯದಲ್ಲಿ ಕೊನೆಗೊಂಡಿತು. ತಾಲೂಕಿನ ಹಲವು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

About The Author

Related Posts