ಉದ್ಯೋಗ ಮೇಳ ಕಾರ್ಯಕ್ರಮದ ವರದಿ  

    ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್‍ಮೆಂಟ್ ಸೆಲ್ ಹಾಗೂ ಪ್ರೊಜೆಕ್ಟ್ ಎಂಪ್ಲಾಯ್‍ಮೆಂಟ್, ಉದ್ಯೋಗ ವಿನಿಮಯ ಕೇಂದ್ರ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 03-02-2019 ರಂದು ಪದವಿ ಕಾಲೇಜಿನ ಆವಾರದಲ್ಲಿ ಬೃಹತ್ ಉದ್ಯೋಗಮೇಳ ಜರುಗಿತು. ಇದರಲ್ಲಿ 20 ಕಂಪನಿಗಳು ಆಗಮಿಸಿ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹಾಗೂ ಮೂರು ಕಂಪನಿಗಳು ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿಯನ್ನೂ ಕೂಡ ನೀಡಿದವು.
ಮುಂಜಾನೆ 9.30 ಗಂಟೆಗೆ ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿ ದೀಪ ಬೆಳಗಿಸಿ ಉದ್ಘಾಟಿಸಿ, ಉದ್ಯೋಗಾಕಾಂಕ್ಷಿಗಳು ನಮ್ಮ ಮಹಾವಿದ್ಯಾಲಯ ಸಂಘಟಿಸುತ್ತಿರುವ ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಹಿಂದೆ ಉದ್ಯೋಗಕ್ಕಾಗಿ ಬೇರೆ ಶಹರಿಗಳಿಗೆ ತೆರಳಿ ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ, ಉದ್ಯೋಗಕ್ಕಾಗಿ ರೆಜಿಸ್ಟರ್ಡ್ ಅಂಚೆಗಳನ್ನು ವಿದ್ಯಾರ್ಥಿಗಳು ನಿರೀಕ್ಷಿಸಬೇಕಾಗಿತ್ತು. ಆದರೆ ಇಂದು ಉದ್ಯೋಗದಾತರೇ ನಿಮ್ಮ ಸ್ಥಳಕ್ಕೆ ಬಂದು ಉದ್ಯೋಗ ನೀಡುತ್ತಿರುವುದು ಇಂದಿನ ವಿದ್ಯಾರ್ಥಿಗಳಿಗೆ ಸಂತಸದ ವಿಚಾರ ಎಂದರು. ವೇದಿಕೆಯಲ್ಲಿ ಪ್ರೊಜೆಕ್ಟ್ ಎಂಪ್ಲಾಯ್‍ಮೆಂಟ್‍ನ ಜಾಬ್ ಡೆವೆಲೋಪ್‍ಮೆಂಟ್ ಎಕ್ಷಿಕ್ಯೂಟಿವ್ ಶ್ರೀ ಸಾಯಿಪ್ರಸಾದ ಹಾಗೂ ಜೋಬ್ ಕೌನ್ಸಲರ್ ಶ್ರೀ ಕಿರಣ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಎಸ್. ಎಂ. ಭಟ್ಟ, ಕೋಶಾಧಿಕಾರಿ ಶ್ರೀ ಉಮೇಶ್ ನಾಯ್ಕ, ಶ್ರೀ ನಾಗರಾಜ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ಲೇಸ್‍ಮೆಂಟ್ ಆಫಿಸರ್ ಡಾ. ಡಿ. ಎಲ್. ಹೆಬ್ಬಾರ ಸ್ವಾಗತಿಸಿ ಪರಿಚಯಿಸಿದರು. ಬಿ.ಎ. 6 ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಪ್ರೊ. ಸಂಜೀವ ನಾಯಕ, ಪ್ರೊ. ವಿವೇಕ ನಾಯ್ಕ ಮತ್ತು ಪ್ರೊ. ಯೋಗಿತಾ ಕೆ.ಎಸ್. ನಿರ್ವಹಿಸಿದರು.
ನಂತರ 10.30 ಗಂಟೆಯಿಂದ ವಿವಿಧ ಕೊಠಡಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರಾದ ಶ್ರೀ ಅನಿಲ ಕರ್ನಿಂಗ್ ಸ್ವತಃ ಆಗಮಿಸಿ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆ ಕೈಗೊಂಡರು. ಉದ್ಯೋಗಮೇಳದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ ಒಟ್ಟೂ 734 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಕೊಂಡಿದ್ದರು. ಅವರಲ್ಲಿ 165 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಯಿತು. ಹಾಗೂ 31 ಅಭ್ಯರ್ಥಿಗಳನ್ನು ವೇಟಿಂಗ್ ಲಿಸ್ಟ್‍ನಲ್ಲಿ ಇಡಲಾಯಿತು. ವಿವಿಧ ತರಬೇತಿಗಳಿಗಾಗಿ 42 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಉದ್ಯೋಗ ಮೇಳದಲ್ಲಿ ಮಹಿಳಾ ಅಭ್ಯರ್ಥಿಗಳು ಗಣನೀಯವಾಗಿರುವುದು ವಿಶೇಷವಾಗಿತ್ತು.

About The Author

Related Posts