ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘಕ್ಕೆ ಡಾ. ಎನ್. ಆರ್. ನಾಯಕರಿಂದ ಒಂದು ಲಕ್ಷ ರೂಪಾಯಿ ದತ್ತಿನಿಧಿ ಸಮರ್ಪಣೆ

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಉಳಿದ ಭಾಷೆಗಳು ನಮ್ಮ ಅತಿಥಿಯಾಗಿರಬೇಕೇ ಹೊರತು ಯಜಮಾನ ಆಗಬಾರದು. ಆಧುನಿಕ ಜ್ಞಾನಕ್ಕೆ ಇಂಗ್ಲಿಷ್ ಅನಿವಾರ್ಯವಲ್ಲ. ಇಂಗ್ಲಿಷ್‍ನ್ನು ಬಂಡವಾಳವಾಗಿಸಿಕೊಂಡು ಅದರ ಮೇಲೆ ಕನ್ನಡದ ಚಿಗುರು ಬೆಳೆಯಬೇಕಿದೆ ಎಂದು ಡಾ. ಶ್ರೀಕಂಠ ಕೂಡಿಗೆ ಅಭಿಪ್ರಾಯ ಪಟ್ಟರು.
ಅವರು ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಹೊನ್ನಾವರದ ಕಾಲೇಜಿಗೆ ದೊಡ್ಡ ಪರಂಪರೆಯಿದೆ. ಕನ್ನಡದ ಪ್ರಸಿದ್ಧ ಸಾಹಿತಿ ವಿ. ಸೀತಾರಾಮಯ್ಯನವರ ಪ್ರಥಮ ಪ್ರಾಚಾರ್ಯತ್ವದಿಂದ ಆರಂಭಗೊಂಡ ಈ ಕಾಲೇಜಿನಲ್ಲಿ ಡಾ. ಎನ್. ಆರ್. ನಾಯಕ, ಪ್ರೊ. ವಿ.ಕೆ.ವೀಣಾಕರ, ಪ್ರೊ. ಜಿ.ಎಸ್.ಅವಧಾನಿ ಮೊದಲಾದವರು ಕನ್ನಡವನ್ನು ಕ್ರಿಯಾಶೀಲತೆಯಿಂದ ಬೆಳೆಸಿದ್ದಾರೆ. ಡಾ. ಎನ್.ಆರ್.ನಾಯಕರು ಕಾಲೇಜಿನ ಕನ್ನಡದ ನಿರಂತರ ಕನ್ನಡಪರ ಕಾರ್ಯಕ್ರಮಗಳಿಗಾಗಿ ಒಂದು ಲಕ್ಷ ರೂಪಾಯಿ ದತ್ತಿನಿಧಿ ಅರ್ಪಿಸಿರುವುದು ಅವರ ಅನುಪಮವಾದ ನುಡಿಪ್ರೇಮಕ್ಕೆ ಸಾಕ್ಷಿಯಾಗಿದೆ. ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಡಾ. ನಾಯಕರನ್ನು ಸರ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕಿದೆ, ಅವರು ಶತಾಯುಷಿಗಳಾಗಲಿ ಎಂದು ಆಶಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಡಾ ಎನ್.ಆರ್.ನಾಯಕರ ಸಮಗ್ರ ಕಾವ್ಯ ಸಂಪುಟ 2 ‘ಬದುಕು ಮಹಾಕಾವ್ಯ’ ಕೃತಿಯನ್ನು ಡಾ. ಶ್ರೀಕಂಠ ಕೂಡಿಗೆ ಬಿಡುಗಡೆ ಮಾಡಿದರು.
ಕಾಲೇಜಿನ ಕನ್ನಡ ಸಂಘಕ್ಕೆ ಒಂದು ಲಕ್ಷ ರೂಪಾಯಿ ದತ್ತಿನಿಧಿಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಡಾII ಎಂ. ಪಿ. ಕರ್ಕಿಯವರಿಗೆ ಸಮರ್ಪಿಸಿ ಮಾತನಾಡಿದ ಡಾ. ಎನ್. ಆರ್. ನಾಯಕರು ಪ್ರತಿ ಕಾಲೇಜಿನಲ್ಲೂ ಕನ್ನಡ ಸಂಘವಿರಬೇಕು. ಕನ್ನಡ ನಾಡಿನಲ್ಲಿ ವಾಸಿಸುವವರೆಲ್ಲರೂ ಕನ್ನಡವನ್ನು ಕಲಿಯಲೇಬೇಕು. ಕನ್ನಡದ ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ, ಸಾರ್ವಜನಿಕರಲ್ಲಿ ಕನ್ನಡದ ಬಗ್ಗೆ ಇರುವ ಕೀಳರಿಮೆ ಹೋಗಬೇಕು. ಈ ಕಾಲೇಜು ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಕಾಲೇಜಿಗೆ ಕೊಟ್ಟಿರುವುದು ನನ್ನ ಅಳಿಲು ಸೇವೆ ಮಾತ್ರ. ಈ ದತ್ತಿನಿಧಿಯಿಂದ ಬರುವ ಬಡ್ಡಿಯ ಹಣದಿಂದ ಪ್ರತಿ ವರ್ಷ ಕನ್ನಡ ಪರ ಕಾರ್ಯಕ್ರಮಗಳು ನಡೆಯಬೇಕೆಂಬುದು ನನ್ನ ಆಶಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಭಾರೆ ಪ್ರಾಚಾರ್ಯರಾದ ಪ್ರೊ. ಪಿ. ಎಂ. ಹೊನ್ನಾವರ ಒಂದು ಬೆಳಕಿನ ಹಿಂದೆ ಎಣ್ಣೆ, ಬತ್ತಿ, ಹಣತೆಯ ಶ್ರಮವಿರುತ್ತದೆ. ಅಂತೆಯೇ ನಮ್ಮ ಕಾಲೇಜಿನ ಸಾಂಸ್ಕøತಿಕ ಮತ್ತು ರಂಗ ಚಟುವಟಿಕೆಗಳಲ್ಲಿ ಕನ್ನಡ ಸಂಘ ಯಾವಾಗಲೂ ಸಿಂಹಪಾಲು ಪಡೆಯುತ್ತದೆ. ಇದು ನಮಗೆ ಸಂತೋಷದ ಸಂಗತಿ. ಇದಕ್ಕಾಗಿ ನಾನು ಕನ್ನಡ ವಿಭಾಗದ ಎಲ್ಲಾ ಪ್ರಾಧ್ಯಾಪಕರನ್ನು ಅಭಿನಂದಿಸುತ್ತೇನೆ. ಎಂದರು.
ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಡಾII ಎಂ. ಪಿ. ಕರ್ಕಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಎನ್.ಆರ್.ನಾಯಕರನ್ನು ಕಾಲೇಜಿನ ಕನ್ನಡ ಸಂಘದ ಪರವಾಗಿ ಸನ್ಮಾನಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ನಾಗರಾಜ ಹೆಗಡೆ, ಅಪಗಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಂಘದ ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಡಾ. ಶ್ರೀಪಾದ ಶೆಟ್ಟಿ, ಸುಮುಖಾನಂದ ಜಲವಳ್ಳಿ, ಕೃಷ್ಣಮೂರ್ತಿ ಹೆಬ್ಬಾರ, ಪ್ರಶಾಂತ ಮೂಡಲಮನೆ, ಶಾರದಾ ಭಟ್ಟ, ಕೆ. ಎಂ. ಅಶ್ವಿನಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಈ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ಸಂಗೀತದ ಸಂಘದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ನಡೆಸಿಕೊಡುವ ಗೀತವೈವಿದ್ಯ ‘ಮಾಸದ ಸಂಗೀತ’ ಕಾರ್ಯಕ್ರಮ ಸೇರಿದ ಎಲ್ಲಾ ಸಭಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.

About The Author

Related Posts