ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೊಪ ಸಮಾರಂಭ

ಸೇವಾ ಮನೋಭಾವ ಬೆಳೆಯಲು ಎನ್.ಎಸ್.ಎಸ್. ಸಹಕಾರಿ ಎಂದು ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿಯವರು ಅಭಿಪ್ರಾಯ ಪಟ್ಟರು. ಅವರು ವಂದೂರಿನಲ್ಲಿ ಆಯೋಜಿಸಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಇನ್ನಿಬ್ಬರು ಅತಿಥಿಗಳಾದ ಶ್ರೀ ಎಸ್. ಎಂ. ಭಟ್ಟ ಮತ್ತು ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಗೋವಿಂದ ಗೌಡರವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕರವರು ಅಧ್ಯಕ್ಷತೆ ವಹಿಸಿದ್ದರು.
ದಿನಾಂಕ 06-03-2019 ರಂದು ಡಾ. ವಿಜಯಲಕ್ಷ್ಮಿ ಎಂ. ನಾಯ್ಕರವರ ಅಧ್ಯಕ್ಷತೆಯಲ್ಲಿ ಮತ್ತು ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀಮತಿ ಊರ್ಮಿಳಾ ಶೇಟ್ ಮತ್ತು ಮುಖ್ಯೋಪಾದ್ಯಾಯೆ ಶ್ರೀಮತಿ ಉಷಾ ನಾಯ್ಕರವರ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಶ್ರೀಕಲಾ ಶಾಸ್ತ್ರಿಯವರಿಂದ ಉದ್ಘಾಟನೆಗೊಂಡ ಈ 7 ದಿನಗಳ ಶಿಬಿರದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳು ಬಹಳ ಕಾಲದಿಂದ ಮಣ್ಣಿನಿಂದ ಮುಚ್ಚಿಹೋಗಿ ನಿರುಪಯುಕ್ತವಾಗಿದ್ದ ಬೋರ್‍ವೆಲ್ ಮೇಲಿದ್ದ ಮಣ್ಣು ಕಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಿ ಅದು ಉಪಯೋಗಕ್ಕೆ ಬರುವಂತೆ ಮಾಡಿದರು. ಮಣ್ಣಿನಿಂದ ಮುಚ್ಚಿಹೋಗಿದ್ದ ಚರಂಡಿಯಲ್ಲಿದ್ದ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಿ ಮಳೆಗಾಲದಲ್ಲಿ ರಸ್ತೆ ಹಾಳಾಗದಂತೆ ಮಾಡಿದರು. ತೋಟದಲ್ಲಿದ್ದ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಕೆರೆಗಳನ್ನು ಸ್ವಚ್ಛಗೊಳಿಸಿದರು. ಮತದಾನ ಜಾಗೃತಿ ಜಾಥಾ ಕೈಗೊಂಡು ಮನೆಮನೆಗೆ ತೆರಳಿ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಪ್ರತಿದಿನ ಸಂಜೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಎರಡನೇ ದಿನ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಎಂ. ಜಿ. ಹೆಗಡೆಯವರ ಅಧ್ಯಕ್ಷತೆಯಲ್ಲಿ ಸ್ವಉದ್ಯೋಗ ಮಾರ್ಗದರ್ಶನದ ಬಗ್ಗೆ ಡಾ. ವಿ. ಎಂ. ಭಂಡಾರಿಯವರು ಉಪನ್ಯಾಸ ನೀಡಿದರು. ಮೂರನೇ ದಿನ ಪ್ರೊ. ಎಸ್. ಸುರೇಶರರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುರೇಶ ನಾಯ್ಕ ಮತ್ತು ಸಂತೆಗುಳಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮತದಾರ ಜಾಗೃತಿ ಬಗ್ಗೆ ಡಾ. ಎಂ. ಆರ್. ನಾಯಕರವರು ಹಾಗೂ ಜೀವಜಲ ಸಂರಕ್ಷಣೆಯ ಕುರಿತು ಪ್ರೊ. ಎಂ. ಜಿ. ಹೆಗಡೆಯವರು ಉಪನ್ಯಾಸ ನೀಡಿದರು. ತಾಲೂಕ ಪಂಚಾಯತ ವತಿಯಿಂದ ಮತದಾನ ಯಂತ್ರ ಖಾತ್ರಿ ಪ್ರಾತ್ಯಕ್ಷಿಕೆ ನಡೆಯಿತು. ನಂತರ ಪರಂಪರೆ ಕೂಟದ ವತಿಯಿಂದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಾಲ್ಕನೆಯ ದಿನದ ಉಪನ್ಯಾಸದಲ್ಲಿ ಜಾಗತಿಕ ತಾಪಮಾನದ ಅರಿವು ಎಂಬ ವಿಷಯದ ಮೇಲೆ ಪ್ರೊ. ಆರ್. ವಿ. ಹೆಗಡೆಯವರು, ಘನತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಮೇಲೆ ಪ್ರೊ. ಎಚ್.ಟಿ.ಅರ್ವಾರೆಯವರು ಉಪನ್ಯಾಸ ನೀಡಿದರು. ಇದೇ ದಿನ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಎನ್.ಎಸ್.ಎಸ್. ಕೋಶದ ಸಂಯೋಜನಾಧಿಕಾರಿಗಳಾದ ಡಾ. ಎಂ. ಬಿ. ದಳಪತಿಯವರು ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳಾದ ಪ್ರೊ. ಜಿ. ಜಿ. ಭಟ್ಟರವರು ಶಿಬಿರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಐದನೇಯ ದಿನದ ಉಪನ್ಯಾಸದಲ್ಲಿ ಡಾ. ರಂಗನಾಥ ಪೂಜಾರಿಯವರು ಅಧ್ಯಕ್ಷತೆ ವಹಿಸಿದ್ದು, ಆರೋಗ್ಯ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು. ಮಾಹಿತಿ ಹಕ್ಕು ಕಾಯ್ದೆಯ ಕುರಿತು ವಕೀಲರಾದ ಶ್ರೀ ಎಂ. ಎಸ್. ಭಟ್ಟರವರು, ವ್ಯಕ್ತತ್ವ ವಿಕಸನದ ಬಗ್ಗೆ ಶ್ರೀ ಮಹೇಶ ಕಲ್ಯಾಣಪುರ ಉಪನ್ಯಾಸ ನೀಡಿದರು.
ಆರನೇಯ ದಿನದ ಉಪನ್ಯಾಸದಲ್ಲಿ ವಕೀಲರಾದ ಶ್ರೀಮತಿ ಶರಾವತಿ ಹೆಗಡೆಯವರ ಗ್ರಾಮೀಣ ಮಹಿಳೆಯ ಸಬಲೀಕರಣದ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿದಿನ ಶಿಬಿರದಲ್ಲಿ ಮುಂಜಾನೆ ಧ್ವಜಾರೋಹಣ, ವ್ಯಾಯಾಮ ಮತ್ತು ಸಂಜೆ ಮನರಂಜನಾ ಕಾರ್ಯಕ್ರಮ ಜರುಗಿದವು.

About The Author

Related Posts